ಜೋಡಿ ಕೊಲೆ ಪ್ರಕರಣ: ಆರೋಪಿ ಅಲ್ಫೋನ್ಸ್ ಸಲ್ದಾನಗೆ ಜೀವಾವಧಿ ಶಿಕ್ಷೆ
RB NEWS
Bureau Report
ಜೋಡಿ ಕೊಲೆ ಪ್ರಕರಣ: ಆರೋಪಿ ಅಲ್ಫೋನ್ಸ್ ಸಲ್ದಾನಗೆ ಜೀವಾವಧಿ ಶಿಕ್ಷೆ
ಮಂಗಳೂರು: ಮುಲ್ಕಿ ತಾಲೂಕು ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಆಗಿಂದಕಾಡು ಪ್ರದೇಶದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿ ಅಲ್ಫೋನ್ಸ್ ಸಲ್ದಾನಗೆ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. 2020ರ ಏಪ್ರಿಲ್ 29ರಂದು, ಮನೆ ಸಮೀಪ ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ವಿನ್ಸಿ ಅಲಿಯಾಸ್ ವಿನ್ಸೆಂಟ್ ಡಿಸೋಜ ಹಾಗೂ ಅವರ ಪತ್ನಿ ಹೆಲೆನ್ ಡಿಸೋಜ ಅಲಿಯಾಸ್ ಹೆಲೆನ್ ರೋಸಿ ರೋಡ್ರಿಗಸ್ ಅವರನ್ನು ಆರೋಪಿ ಕೊಲೆ ಮಾಡಿದ್ದನು ಎಂಬ ಆರೋಪ ಸಾಬೀತಾಗಿದೆ. ಈ ಪ್ರಕರಣದ ತನಿಖೆಯನ್ನು ಅಂದಿನ ಮುಲ್ಕಿ ಠಾಣೆಯ ನಿರೀಕ್ಷಕ ಜಯರಾಮ ಡಿ.ಗೌಡ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆಯನ್ನು ಆರಂಭದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ನಡೆಸಿದ್ದರು. ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆಯೊಂದಿಗೆ 2 ಲಕ್ಷ ರೂ. ದಂಡ ವಿಧಿಸಿದೆ. ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಜುಡಿತ್ ಓಲ್ಗಾ ಮಾರ್ಗರೇಟ್ ವಾದ ಮಂಡಿಸಿದ್ದರು.