[t4b-ticker]

ಜೀವನದಲ್ಲಿ ಶಿಸ್ತು

Picture of RB NEWS

RB NEWS

Bureau Report

ಜೀವನದಲ್ಲಿ ಶಿಸ್ತು- ಅತ್ಯುತ್ತಮವಾದ, ಯಶಸ್ವಿ
ಮಾದರಿ – ಆದರ್ಶದ ಜೀವನಕ್ಕೆ; ಜೀವನ ಶಿಸ್ತು ಅತೀ ಅಗತ್ಯ. ಈ ಜೀವನ ಶಿಸ್ತು ಅಂದರೆ ಘನಗಂಭೀರವಾದ, ಅತಿಯಾದ ನಿಷ್ಪ್ರಯೋಜಕ ಶಿಸ್ತು ಸಹ ಅಲ್ಲ, ಆಗಬಾರದು. ಕನಿಷ್ಟ ಶಿಸ್ತು ಸಹ ಇಲ್ಲದ ಜೀವನ ಕಷ್ಟ, ನಷ್ಟ, ಸಮಸ್ಯೆ, ದುಃಖಗಳ ಪಯಣ ಆಗಬಹುದು. ಅತಿ ಆಗದ, ಏನೂ ಇಲ್ಲದಗಳ ನಡುವಿನ ಜೀವನ ಶಿಸ್ತನ್ನು ನಾವು ನಾವೇ ಸ್ವತಹ ಯೋಚಿಸಿ ಮುಂದುವರಿಸಿಕೊಂಡು ಹೋಗುವುದು ಶ್ರೇಯಸ್ಕರವಾದುದು.

ಮುಸ್ಸಂಜೆಯಿಂದ ರಾತ್ರಿ ಮಲಗುವ ವರೆಗಿನ ದಿನಚರಿಯನ್ನು ಹೇಗೆ ಸಮರ್ಥವಾಗಿ, ಸಮಯೋಚಿತವಾಗಿ ಹೇಗೆ ನಿರ್ವಹಿಸಬಹುದು, ಯಾವ ರೀತಿಯಲ್ಲಿ ಸದ್ಬಳಕೆ ಮಾಡಬಹುದು ಎನ್ನುವುದನ್ನು ಯೋಜಿತವಾಗಿ ರೂಪಿಸಿ ನಿತ್ಯ ಜೀವನದಲ್ಲಿ ಆಚರಣೆಯಲ್ಲಿಡುವುದೇ ಜೀವನದ ಶಿಸ್ತು.

ಬೆಳಗ್ಗೆ ನಾವು ಎಷ್ಟು ಬೇಗ ಏಳುತ್ತೇವೆ ಎಂಬುದರಲ್ಲಿ ಅತ್ಯಮೂಲ್ಯ ಸಮಯದ ಲಾಭ – ನಷ್ಟ ಅಡಗಿದೆ. ಆರು ಗಂಟೆಗೆ ಏಳಲೇಬೇಕು. ಮುಂಜಾನೆ ಐದು ಗಂಟೆಗೆ ಎದ್ದರೆ ಉತ್ತಮ. ನಮ್ಮ ದಿನಚರಿಗೆ ಅತ್ಯಮೂಲ್ಯವಾದ ಒಂದು ಗಂಟೆ ನಮಗೆ ಹೆಚ್ಚುವರಿಯಾಗಿ ಲಭ್ಯ. ನಸುಕಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ಅತ್ಯುತ್ತಮ. ಎರಡು ಗಂಟೆಗಳ ಅತ್ಯಮೂಲ್ಯವಾದ ಸಮಯ ನಮ್ಮ ಯಶಸ್ವಿ ಜೀವನಕ್ಕೆ ಸಿಗುವ ವರದಾನವೇ ಹೌದು.

ಬೆಳಗ್ಗಿನ ಒಂದು ಅಥವಾ ಎರಡು ಗಂಟೆಯ ಸನಯವನ್ನು ಹೇಗೆ ಮತ್ತು ಯಾಕೆ ಸದ್ವಿನಿಯೋಗ ಮಾಡಬಹುದು ಎನ್ನುವುದು ಅವರವರಿಗೆ ಬಿಟ್ಟ ವಿಷಯ. ಕಳೆದ ಕಾಲ ಮತ್ತೆ ಎಂದಿಗೂ ಸಿಗದು. ತಡವಾಗಿ ಎದ್ದರೆ ಆ ಕಳೆದು ಹೋದ ಸಮಯ ಜೀವನದಲ್ಲಿ ಮತ್ತೆಂದಿಗೂ ಸಿಗದು. ಹಾಗಾಗಿ ಈ ಸಮಯವನ್ನು ನಾವು ಸಮರ್ಥವಾಗಿ, ಸಕಾರಾತ್ಮಕವಾಗಿ ಸದ್ವಿನಿಯೋಗ ಮಾಡುವುದು ಬಹಳ ಮುಖ್ಯ.

ಎದ್ದು ಮಲಗುವ ಮಧ್ಯೆ ನಮ್ಮ ದಿನಚರಿ, ನಮ್ಮ ಕ್ಷಣ ಕ್ಷಣದ ನಡೆ ಮತ್ತು ನುಡಿ ನಮ್ಮ ಜೀವನದ ಯಶಸ್ಸನ್ನು ನಿರ್ಧರಿಸುತ್ತದೆ. ಸಕಾರಾತ್ಮಕವಾದ ಯೋಚನೆ ಮತ್ತು ಯೋಜನೆಗಳಿಂದ ಮಾತ್ರ ಶಿಸ್ತಿನ ಜೀವನ ರೂಪಿಸಲು ಸಾಧ್ಯ.

ಮಕ್ಕಳು, ಮಹಿಳೆಯರು, ಪುರುಷರು ಅತ್ಯಮೂಲ್ಯ ಸಮಯ ನಿರರ್ಥಕವಾಗದಂತೆ ಮನೆಯ ಒಳಗಡೆ ಮತ್ತು ಮನೆಯ ಹೊರಗಡೆ ತಮ್ಮ ತಮ್ಮ ಆಸಕ್ತಿ, ಹವ್ಯಾಸ, ಕಾಳಜಿ, ಸಾಧನೆ, ಗುರಿ ಉದ್ಧೇಶಗಳಿಗನುಸಾರವಾಗಿ ಕೆಲಸ ಕಾರ್ಯಗಳ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತವಾದರೆ ಸಮಯದ ಸಮರ್ಥ ಸದ್ವಿನಿಯೋಗದ ಜೊತೆಗೆ ಜೀವನದಲ್ಲಿ ಸಂತೃಪ್ತಿಯನ್ನು ಹೊಂದಬಹುದು.

ಮಕ್ಕಳು ತಮ್ಮ ಕಲಿಕೆಯ ಜೊತೆಗೆ ಹೆತ್ತವರ ಕೆಲಸ ಕಾರ್ಯಗಳ ಜೊತೆಗೆ, ಗಂಡಂದಿರು ಪತ್ನಿಯರ ಮನೆ ಕೆಲಸಗಳ ಜೊತೆಗೆ ಕೈಜೋಡಿಸಬಹುದು. ಜನಸಂಪರ್ಕಕ್ಕಾಗಿ, ಅನುಭವದ ವಿಸ್ತಾರಕ್ಕಾಗಿ ಪ್ರಯಾಣ – ಪ್ರವಾಸ, ಓದು – ಬರೆಹ, ವಿವಿಧ ಜನವರ್ಗಗಳ ಜನರ ಭೇಟಿ – ಮಾತುಕತೆ ಹೀಗೆ ಹತ್ತು ಹಲವು ರೀತಿಗಳಲ್ಲೂ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬಹುದು.

ಕ್ಷಣ ಕ್ಷಣದ ಸಮಯದ ಸದ್ವಿನಿಯೋಗದಿಂದಾಗಿ ದೇಹ ಮತ್ತು ಮನಸ್ಸಿಗೆ ಚೈತನ್ಯ, ಲವಲವಿಕೆ, ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ಜೀವನದಲ್ಲಿ ಸರ್ವ ಯಶಸ್ಸುಗಳು ಪ್ರಾಪ್ತವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top