……..ಜಿಂದಾಬಾದ್ ಸಂಸ್ಕೃತಿ

Picture of RB NEWS

RB NEWS

Bureau Report

ಕಾಂಗ್ರೆಸ್ ಪಕ್ಷದ ನಾಸಿರ್ ಅವರು ರಾಜ್ಯ ಸಭೆಗೆ ಆಯ್ಕೆಯಾಗಿರುವುದು ಖಚಿತವಾದ ನಂತರ ಅವರ ಬೆಂಬಲಿಗರೆಂದುಕೊಂಡ ಸುಮಾರು ಇಪ್ಪತ್ತೈದು ಮಂದಿಗಳು ವಿಧಾನಸೌಧದೊಳಗೆ ಪ್ರವೇಶಿಸಿ, ಅಲ್ಲಿ ಜಿಂದಾಬಾದ್ ಕೂಗುವುದರ ಉದ್ದೇಶವೇನಿತ್ತು?

ವಿರೋಧಿ ದೇಶದ ಹೆಸರನ್ನು ಉಚ್ಚಾರಿಸಿಯೇ ಇಲ್ಲ ಎನ್ನುವ ವಾದಕ್ಕಿಂತಲೂ ಮುಖ್ಯವಾಗಿ ಆ ಘೋಷಣೆ ಕೂಗುವುದಕ್ಕೆ ಅವರೇನು ಯುದ್ಧ ಗೆದ್ದು ಬಂದಿದ್ದಾರೆಯೆ? ಅಥವಾ ವಿರೋಧಿ ದೇಶವನ್ನು ಸದೆಬಡಿಯಲಿಕ್ಕೆ ಹೊರಟ್ಟಿದ್ದೇ? ಪಕ್ಷದ್ದೇ ಪುಕ್ಕಟೆ ಮತಗಳಿವೆ. ಪಕ್ಷದ ನಿಯಮಾದೇಶದಂತೆ ಮತ ಹಾಕಲಾಗಿ ಗೆಲ್ಲುತ್ತಾರೆ.
ಬಯಲು, ರಸ್ತೆಯಲ್ಲಾದರೆ ಆ ರೀತಿ ಕೂಗಾಡುವುದಕ್ಕೆ ಪ್ರಕೃತಿಯ ಅನುಮತಿ ಇದೆ.

ಯಾವ ರಾಜಕೀಯ ಪಕ್ಷವೇ ಆಗಿರಲಿ ಸೌಧದೊಳಗೆ ಜಿಂದಾಬಾದ್ ಕೂಗುವುದನ್ನೇ ಅಪರಾಧಗೊಳಿಸಬೇಕು.

ರಾಷ್ಟ್ರೀಯ ಪಕ್ಷವೊಂದು ಮುಸ್ಲಿಮ್ ರಾಜಕಾರಣಿಯನ್ನು ರಾಜ್ಯ ಸಭೆಗೆ ಸದಸ್ಯನನ್ನಾಗಿಸಿದ ಖುಷಿಗೆ ಅದೇ ಸಮುದಾಯದವರು ಖುಷಿ ಪಡುವ ನಡವಳಿಕೆ ಸೌಧದೊಳಗೆ ಕೂಗುವುದಲ್ಲ.

ಅಲ್ಲಿ ಜಿಂದಾಬಾದ ಕೂಗಿದವರು ಯಾರು ಕೂಡ ನಮ್ಮ ವಿರೋಧಿ ರಾಷ್ಟ್ರದವರು ಅಲ್ಲವೇ ಅಲ್ಲ. ಅಲ್ಲಿನ ಭಾರತೀಯ ನಿವಾಸಿಗಳು ಕೂಡಾ ಆಗಿಲ್ಲ. ಹಾಗಿದ್ದೂ ನಾವು ಆ ಒಂದು ಕೂಗು ಹಾಕುವಾಗ ಎಡವಿದ್ದರೂ ಅದು ಅಕ್ಷಮ್ಯ ಅಪರಾಧವೇ ಸರಿ.

ತನ್ನ ಬೆಂಬಲಿಗರಲ್ಲಿ ಅಂಥ ಕೆಟ್ಟ ಮನಸ್ಥಿತಿಯವರೂ ಇದ್ದಾರೆ ಎಂದು ಸಾಬೀತೇನಾದರೂ ಆದಲ್ಲಿ ಆತನ ಮುಂದಿನ ಎಲ್ಲ ನಡವಳಿಕೆ ಹಾಗೂ ವಿಚಾರಗಳು ಸಂಶಯಾಸ್ಪದಕ್ಕೆ ಎಡೆಯಾಗುತ್ತದೆ.

ಅವರಲ್ಲಿ ಯಾರೊಬ್ಬನಾದರೂ ವಿರೋಧಿ ದೇಶದ ಹೆಸರು ಉಚ್ಚರಿಸಿ ಜಿಂದಾಬಾದ್ ಹೇಳಿದ್ದನೋ ಇಲ್ಲವೋ ಎಂಬ ಪರಾಮರ್ಶೆಗೆ ಮುಂಚೆ ಆ ಕೂಗು ಕೂಗುವುದರ ಸಾರ್ವತ್ರಿಕ ಉದ್ದೇಶವಾದರೂ ಏನೆಂಬುದರ ಬಗ್ಗೆಯೂ ಸಂಶಯ ಬರುತ್ತದೆ.

ಬಿಜೆಪಿಯವರು ಕರ್ನಾಟಕದಲ್ಲಿ ವಿಕೇಟ್ ಕೀಪರ್ ತರಹ ಕೆಲಸ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ಮತ್ತು ಡಿ ಕೆ ಶಿ ತಂಡದವರು ಎಲ್ಲಿ ಯಾವ ಹೊತ್ತಲ್ಲಿ ಕ್ರೀಸ್ ಬಿಟ್ಚಿರುತ್ತಾರೆ. ಬ್ಯಾಟಿಂದ ಚಿಪ್ ಸದ್ಗು ಕೇಳುತ್ತದೆ ಎಂಬುದನ್ನು ಕಣ್ಣಿಗೆ, ಕಿವಿಗೆ ಎಣ್ಣೆ ಹಚ್ಚಿಕೊಂಡೇ ಕಾಯುತ್ತಿರುತ್ತಾರೆ. ಅಷ್ಟೊಂದು ಹಗೆಕಾಯುವ ರಾಜಕೀಯ ನಮ್ಮ ರಾಜ್ಯದಲ್ಲಿ ಸಧ್ಯಕ್ಕೆ ಇದೆ. ಹಾಗಿರುವಾಗ ಹೊಣೆಗಾರಿಕೆ ಎನ್ನುವುದು, ಅವರು ತಿರುಚಿದ್ದಾರೆ ಎಂದು ಹೇಳುವುದಕ್ಕಷ್ಟೇ ಸೀಮಿತವಾಗುವುದಿಲ್ಲ.ರಾಜಕಾರಣಿಯೊಬ್ಬನ ಮೈಕ್ ಮುಂದಿನ ರಾಜಕೀಯ ಭಾಷಣದ ತುಣುಕನ್ನು ಆತ ಅಲ್ಲಗಳೆಯುವುದಕ್ಕೂ ,ವಿರೋಧಿ ದೇಶಕ್ಕೆ ಜಿಂದಾಬಾದ ಹೇಳಿದ್ದಾರೆ ಎನ್ನುವ ಸೂಕ್ಷ್ಮ ವಿಚಾರವನ್ನು ಅಲ್ಲಗಳೆಯುವುದಕ್ಕೂ ಸಾವಿರ ಪಾಲು ವ್ಯತ್ಯಾಸವಿರುತ್ತದೆ, ಸಿಕ್ಕುಗಳಿರುತ್ತದೆ. ಎರಡನೆಯದರಲ್ಲಿ ಮರೆತು ಬಿಡುವದಕ್ಕೂ ಅವಕಾಶವಿಲ್ಲವಾಗುತ್ತದೆ.
ಕಾಂಗ್ರೆಸ್ ಪಕ್ಷದ ಮುಸ್ಲಿಮ್ ನಾಯಕರು ತಾವು ಇನ್ನೂ ಕೂಡಾ ದೇಶದೊಳಗಿನ ಸೂಕ್ಷ್ಮ ಪ್ರಜ್ಞೆಯನ್ನು ಮನನ ಮಾಡಿಕೊಂಡಿಲ್ಲ ಮತ್ತು ಗೌರವಿಸುತ್ತಿಲ್ಲ. ನಮ್ಮಲ್ಲಿ ಭಾರತೀಯತೆ ಹಾಗೂ ದೇಶ ಪ್ರೇಮ ಇದೆ, ಬಿಜೆಪಿ ಕಲಿಸಿಕೊಡಬೇಕಾಗಿಲ್ಲ ಅಥವಾ ಬೇರೆಯವರು ಪಾಠ ಹೇಳುವ ಅಗತ್ಯವಿಲ್ಲ ಎಂದು ಮಾತೆತ್ತಿ ವಿರೋಧಿಸುವುದಕ್ಕಿಂತ ನಮ್ಮಲ್ಲಿ ಜೈ ಹೇಳುವವರು ಕೆಲವು ಸಂದರ್ಭದಲ್ಲಿ ಎಡವಟ್ಚು ಮಾಡಿದ್ದರಿಂದ ಅದೊಂದು ವಿವಾದದ ಕಿಡಿ ಯಾವಾಗಲಾದರೂ ಬೂದಿ ಮುಚ್ಚಿಕೊಂಡೇ ಇರುತ್ತದೆ ಅಂದುಕೊಂಡಿರಬೇಕಾಗುತ್ತದೆ.

ಆ ಇಪ್ಪತ್ತೈದು ಮಂದಿಯ ಯಾವ ಪ್ರಭಾವವೂ ನಾಸಿರ್ ಗೆ ಟಿಕೇಟ್ ದೊರಕಿಸಿಕೊಟ್ಟಿದ್ದಲ್ಲ. ಅವರನ್ನು ಒಳಗೆ ಕರೆಸಿಕೊಳ್ಳುವ ಅಗತ್ಯತೆಯೂ ನಾಸಿರ್ ಗೆ ಯಾಕೇ ಬೇಕಾಗಿತ್ತು?

ಅವರಲ್ಲಿ ಯಾವನಾದರೂ ಒಬ್ಬ ತನ್ನ ಕಿಡಿಗೇಡಿತನವನ್ನು ತೋರಿಸಿಕೊಟ್ಟಿದ್ದಾನೆ ಎಂದು ಸಾಬೀತಾದಲ್ಲಿ ಅವನಿಗೆ ಕಾನೂನಾತ್ಮಕ ಶಿಕ್ಷೆಗಿಂತಲೂ ಮುಖ್ಯವಾಗಿ ನಾಸಿರ್ ಅವರು ತನ್ನ ನೈತಿಕ ಹೊಣೆಗಾರಿಕೆ ಏನೆಂದು ತೋರಿಸಿಕೊಡುತ್ತಾರೆ ಎನ್ನುವುದು ಕೂಡಾ ಸಾರ್ವಜನಿಕ ನಿರೀಕ್ಷೆಯಾಗಿರುತ್ತದೆ.

ನಾಸಿರ್ ಜಿಂದಾಬಾದಿನಲ್ಲಿ ಕೇಳಿ ಬಂದಿರುವ ವಿವಾದವು , ಕಳೆದ ಬಿಜೆಪಿ ಆಡಳಿತವಿದ್ದಾಗಿನ ಮಂಡ್ಯದ ಬಿಜೆಪಿ ಮುಖಂಡನೂ ವಿರೋಧಿ ದೇಶದ ಹೆಸರನ್ನು ಬಳಸಿ ಜಿಂದಾಬಾದ್ ಹೇಳಿ ರಾಜಕೀಯ ಮುಜುಗರ ತರಿಸಿದ್ದರ ಪ್ರಕರಣವು ಅಲ್ಲೇ ಮುಚ್ಚಿಸಿಕೊಂಡಿದ್ದರಿಂದ ಈಗ ಸೇಡಿಗೆ ಸೇಡು ಎನ್ನುವ ರೀತಿನಲ್ಲಿ ಹಳೆಯ ಕೇಸ್ ಫೈಲಿನ ಧೂಳು ಕೊಡವಲಾಗಿ ಆತನ ಬಂಧನವಾಗಿದೆ ಅನಿಸಿರಬೇಕು.

ಬಿಜೆಪಿಯವರಿಗೆ ಆ ವಿರೋಧಿ ಘೋಷಣೆ ಅಗತ್ಯ ಔಷಧಿ ಅನ್ನುವುದು ಸಾರ್ವತ್ರಿಕ ಸತ್ಯ.

ಯಾವುದೋ ವಿರೋಧಿಗಳ ಸಭೆಗೆ ಕಲ್ಲು ಬಿಸಾಕಿ ಗಲಾಟೆ ನೋಡುವ ಹುಟ್ಟು ನೀತಿಯೂ ಬಿಜೆಪಿದ್ದಾಗಿರುತ್ತದೆ.

ಹೊಸ ಗಲಾಟೆಯನ್ನು ಸೃಷ್ಟಿ ಮಾಡುವುದಕ್ಕೆ ಅವರಿಂದಲೇ ಕಲಿಯಬೇಕು. ಮಂಡ್ಯದ ಆ ವ್ಯಕ್ತಿಗೆ ಆವೊತ್ತೇ ದೇಶ ವಿರೋಧಿ ಶಿಕ್ಷೆಗೆ ಅನುಕೂಲವಾಗುವಂತೆ ಎಫ್ ಐ ಆರ್ ಮಾಡಿಸಿದ್ದರೆ ಮುಂದೆಗೆ ಯಾವ ಪಕ್ಷದವನು ಅಥವಾ ಯಾವನೇ ಮುಸ್ಲಿಮನೂ ಆ ದೇಶದ ಹೆಸರೆತ್ತಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅದರ ಕುರಿತು ಕಾಂಗ್ರೆಸ್ ಕೂಡಾ ಯಾವುದೇ ರೀತಿಯಲ್ಲಿ ಗಂಭೀರ ಹೋರಾಟ ಮಾಡಿದ್ದೇ ಇಲ್ಲ!

ದೇಶ ವಿರೋಧಿ ಘೋಷಣೆಯು ಶಿಕ್ಷೆಗೆ ನೇರ ಭಡ್ತಿ ಎಂದು ಸಂಸದರು,ಶಾಸಕರು ಕಾನೂನು ತಿದ್ದುಪಡಿ ತಂದದ್ದೇ ಆದಲ್ಲಿ ಯಾರೂ ಆ ಕೀಟಲೆಗೆ ಮುಂದಾಗುವುದಿಲ್ಲ. ನಮ್ಮ ರಾಜಕೀಯ ಪಕ್ಷಗಳು ರಚಿಸಿಕೊಂಡಿರುವ ಪಕ್ಷದ ಸಂವಿಧಾನ ಪ್ರತಿಯನ್ನು ಸುಪ್ರೀಮ್ ಕೋರ್ಟು ಮತ್ತು ಹೈ ಕೋರ್ಟುಗಳ ಮೇಜಿನ ಮೇಲೆ ದಿನಾ ಬಿಚ್ಚಿಡಬೇಕು .ಆ ಪ್ರಕಾರ ಈ ರಾಜಕಾರಣಿಗಳನ್ನು ಅಪೀಲಿಗೆ ಅವಕಾಶ ಕೊಡದೆ ಜೈಲಿಗೆ ಅಟ್ಟಬೇಕು. ಆಗಷ್ಟೆ ದೇಶ ಪ್ರೇಮದ ಪಾಠವನ್ನು ಪಕ್ಷಗಳೇ ಕಲಿಸುತ್ತವೆ,ದೇಶ ವಿರೋಧಿ ಹೇಳಿಕೆಯನ್ನು ಮರೆತು ಬಿಡುತ್ತವೆ.

-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top