ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‌ನಲ್ಲಿ ನೂತನ ವಿದ್ಯಾರ್ಥಿ ಪರಿಷತ್ತು ಉದ್ಘಾಟನೆ

Picture of RB NEWS

RB NEWS

Bureau Report


ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‌ನ 2026-27ನೇ ಸಾಲಿನ ನೂತನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭವು ಜುಲೈ 31ರಂದು ಸಂಸ್ಥೆಯ ಸಪ್ತಸ್ವರ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರಾದ ಅಶ್ವಥ್ ಎಸ್.ಎಲ್., ಆದರ್ಶ ಎಂ.ಕೆ., ಡಾ. ಗಣನಾಥ್ ಶೆಟ್ಟಿ, ಗಣಪತಿ ಭಟ್ ಕೆ.ಎಸ್., ವಿಮಲ್ ರಾಜ್ ಹಾಗೂ ಅಮೃತ ರೈ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಗೌರವದ ಬ್ಯಾಡ್ಜ್‌ಗಳನ್ನು ತೊಡಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ವಿಮಲ್ ರಾಜ್ ಅವರು, “ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನಾಯಕತ್ವ ಗುಣ ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು. ನಾಯಕತ್ವವೆಂದರೆ ಕೇವಲ ಅಧಿಕಾರವಲ್ಲ, ಅದು ಜವಾಬ್ದಾರಿ, ಶಿಸ್ತು ಮತ್ತು ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯ ಸಂಕೇತವಾಗಿದೆ. ಶಾಲೆಯ ಗೌರವವನ್ನು ಹೆಚ್ಚಿಸುವ ರೀತಿಯಲ್ಲಿ ವಿದ್ಯಾರ್ಥಿ ನಾಯಕರು ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಿದರು.
ಸಂಸ್ಥಾಪಕ ಅಶ್ವಥ್ ಎಸ್.ಎಲ್. ಅವರು ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿಯೇ ದೊಡ್ಡ ಕನಸುಗಳನ್ನು ಕಾಣಬೇಕು. ಸಮಾಜದ ಒಳಿತಿಗಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ” ಎಂದು ಹೇಳಿದರು.
ನಂತರ ಶಾಲಾ ಪ್ರಾಂಶುಪಾಲರಾದ ಅಕ್ಷತಾ ಶೆಣೈ ಅವರು ನೂತನ ಶಾಲಾ ನಾಯಕ ಪ್ರತ್ಯಕ್ಷ ನಾಯಕ್, ಶಾಲಾ ನಾಯಕಿ ಪ್ರಾಪ್ತಿ ನೆಲ್ಲಿ ಸೇರಿದಂತೆ ವಿವಿಧ ಸದನಗಳ ನಾಯಕರು, ಕ್ರೀಡೆ, ಶಿಸ್ತು ಹಾಗೂ ಸಾಂಸ್ಕೃತಿಕ ವಿಭಾಗಗಳ ಪ್ರತಿನಿಧಿಗಳಿಗೆ ಅಧಿಕಾರದ ಪ್ರತಿಜ್ಞಾವಿಧಿ ಬೋಧಿಸಿದರು.
ಸಮಾರಂಭದಲ್ಲಿ ಶಾಲೆಯ ಶಿಕ್ಷಕರ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top