ಕಲ್ಲಡ್ಕ ಇಸ್ಮಾಯಿಲ್ ಮರ್ಡರ್ ಮಿಸ್ಟರಿ! – ೧

Picture of RB NEWS

RB NEWS

Bureau Report


ಕಲ್ಲಡ್ಕ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಒಂದು ಗ್ರಾಮ. ಮಂಗಳೂರು-ಬೆoಗಳೂರುರಾಷ್ಟ್ರೀಯ ಹೆದ್ದಾರಿ ಈ ಗ್ರಾಮದ ಮೂಲಕವೇ ಹಾದುಹೋಗುತ್ತದೆ. ಮಂಗಳೂರಿನಿಂದ 32ಕಿ.ಮೀ. ದೂರದಲ್ಲಿದೆ. ಈ ಗ್ರಾಮ ಖ್ಯಾತಿ ಮತ್ತು ಕುಖ್ಯಾತಿಯನ್ನು ಪಡೆದದ್ದು ಎರಡು ಕಾರಣಕ್ಕೆ. ಖ್ಯಾತಿ ಪಡೆದಿರುವುದು ಇಲ್ಲಿ ಕಳೆದ ಒಂದು ಶತಮಾನದಿಂದ ವ್ಯವಹಾರ ನಡೆಸುತ್ತಿರುವ ಹೊಟೇಲ್ ಒಂದರಿoದ. ಕುಖ್ಯಾತಿ ಪಡೆದಿರುವುದು ಕೋಮು ಸಂಘರ್ಷಕ್ಕೆ. ಒಂದು ಶತಮಾನದ ಹಿಂದೆ ಕಲ್ಲಡ್ಕದ ರಸ್ತೆಬದಿಯ ಮುಳಿಹುಲ್ಲಿನ ಜೋಪಡಿಯಲ್ಲಿ ಆರಂಭಗೊoಡoತಹ ಲಕ್ಷ್ಮೀ ನಿವಾಸ ಎಂಬ ಹೊಟೇಲಿನಲ್ಲಿ ಶುದ್ಧ ದನದ ಹಾಲು ಉಪಯೋಗಿಸಿ ತಯಾರಿಸುವ ವಿಶಿಷ್ಟ ಸ್ವಾದದ ಚಹಾದಿಂದ ಈ ಗ್ರಾಮ ಖ್ಯಾತಿ ಪಡೆದಿತ್ತು.

ಈಗಲೂ ಆ ಹೊಟೇಲು ಸುಸಜ್ಜಿತವಾಗಿ ಗ್ರಾಹಕರ ಸೇವೆಗೆ ಲಭ್ಯವಿದೆ. ಈ ಹೊಟೇಲಿನ ಕೆ.ಟಿ. ಎಂಬ ಹೆಸರಿನ ಚಹಾದ ಸ್ವಾದ ಚಪ್ಪರಿಸಲೆಂದೇ ದಿನನಿತ್ಯ ನೂರಾರು ಗ್ರಾಹಕರು ಬರುತ್ತಿರುತ್ತಾರೆ. ಈ ಚಹಾಕ್ಕೆ ಕೆ.ಟಿ. ಎಂದರೆ ಕಲ್ಲಡ್ಕ ಟೀ ಎಂದೇ ಹೆಸರು. ಇಂತಹ ಹೆಸರು ಮಾಡಿರುವ ಗ್ರಾಮ ಕುಖ್ಯಾತಿ ಪಡೆದಿರುವುದು ಇಲ್ಲಿ ಆಗಾಗ್ಗೆ ನಡೆಯುತ್ತಿರುವಂತಹ ಕೋಮು ಸಂಘರ್ಷದಿಂದ. ಈ ಸಂಘರ್ಷಕ್ಕೆ ಸುಮಾರು 6 ದಶಕಗಳ ಇತಿಹಾಸ ಇದೆ.

ಇಲ್ಲಿ ಸಣ್ಣಪುಟ್ಟ ಕಾರಣಗಳಿಗೂ ಧರ್ಮ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇದರಿಂದಾಗಿ ಇಲ್ಲಿ ಕಳೆದ 6 ದಶಕಗಳಿಂದ ಕೆಎಸ್‌ಆರ್‌ಪಿ ತುಕಡಿಯೊಂದು ಶಾಶ್ವತವಾಗಿ ನೆಲೆಯೂರಿದೆ. ಇದೇ ಕಲ್ಲಡ್ಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಮನೆಯಿದೆ. ಅವರ ಕ್ಲಿನಿಕ್ ಇದೆ.

ಈಗ ರಾಷ್ಟ್ರೀಯ ಹೆದ್ದಾರಿ ಇಲ್ಲಿ ಅಗಲೀಕರಣಗೊಳ್ಳುತ್ತಿದೆ ಮತ್ತು ಫ್ಲೈ ಓವರ್ ನಿರ್ಮಾಣ ಕಾರ್ಯ ಆಗುತ್ತಿರುವುದರಿಂದ ಹಳೆಯ ಕಲ್ಲಡ್ಕ ಪೇಟೆ ಅಸ್ತಿತ್ವ ಕಳೆದುಕೊಳ್ಳುವಂತಹ ಸಾಧ್ಯತೆಗಳಿವೆ. ಸಾಂಸ್ಕೃತಿಕವಾಗಿಯೂ ಕಲ್ಲಡ್ಕಕ್ಕೆ ಹಿರಿಮೆ ಇದೆ. ಹಿರಿಯ ನಾಟಕಕಾರ ಶಾಂತಾರಾಮ್ ಕಲ್ಲಡ್ಕ ಇದೇ ಊರಿನವರು. ಇವರ ಸಹೋದರ ರಮೇಶ್ ಅವರು ರೂಪಿಸಿದಂತಹ ಶಿಲ್ಪ ಬೊಂಬೆ ಬಳಗ ರಾಜ್ಯಾದ್ಯಂತ ಹೆಸರು ಮಾಡಿದೆ. ಯಾವುದೇ ದೊಡ್ಡಮಟ್ಟದ ಸಮಾರಂಭಗಳಲ್ಲಿ ಈ ಬೊಂಬೆ ಬಳಗದ ನೃತ್ಯಗಳೇ ಸಾರ್ವಜನಿಕ ಆಕರ್ಷಣೆ. ಇಂತಹ ಹಿನ್ನೆಲೆ ಇರುವಂತಹ ಕಲ್ಲಡ್ಕಕ್ಕೆ ಕಪ್ಪು ಮಸಿ ಬಳಿಯುವಂತಹ ಘಟನೆ ನಡೆದದ್ದು ಈ ದೇಶದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕತ್ತಲಲ್ಲಿಟ್ಟು ತುರ್ತು ಪರಿಸ್ಥಿತಿ ಹೇರಿದಂತಹ ಸಂದರ್ಭದಲ್ಲಿ.

ಆ ಘಟನೆ ನಡೆದು ಇಂದಿಗೆ ಸುಮಾರು 48 ವರ್ಷಗಳಾದರೂ ಇಂದಿಗೂ ಆ ಪರಿಸರದ ಜನರು ಮರೆತಿಲ್ಲ. ಮರೆಯಲು ಸಾಧ್ಯವೂ ಇಲ್ಲ. ಸರಿಸುಮಾರು ನಾಲ್ಕು ತಿಂಗಳ ಕಾಲ ಆ ಪರಿಸರದ ಜನರನ್ನು ಭಯದ ವಾತಾವರಣಕ್ಕೆ ದೂಡಿದಂತಹ ಘಟನೆ ನಡೆದದ್ದು 1976 ಸೆಪ್ಟಂಬರ್ 9 ರಂದು ರಾತ್ರಿ.

ಆ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಜಿಲ್ಲೆ ಯುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿದ್ದ ಕೆ.ಎಂ. ಇಸ್ಮಾಯಿಲ್ ಅವರನ್ನು ಪೊಲೀಸ್ ಜೀಪಿನಲ್ಲಿ ಬಂದು ಕರೆದುಕೊಂಡು ಹೋಗಿ ತದನಂತರ ಹತ್ಯೆ ಮಾಡಿ ಶವವನ್ನು ನೇತ್ರಾವತಿ ನದಿಗೆ ಎಸೆದಂತಹ ಘಟನೆ ರಾಜಕೀಯ ತಿರುವುಗಳನ್ನು ಪಡೆದುಕೊಂಡು ಇಂದಿಗೂ ಒಂದು ನಿಗೂಢ ಘಟನೆಯಾಗಿ ಉಳಿದಿದೆ.


ಕೆ.ಎಂ. ಇಸ್ಮಾಯಿಲ್ ಅವರು ಕಾಂಗ್ರೆಸ್ ಪಕ್ಷದ ಕಟ್ಟಾಳು. ಕಲ್ಲಡ್ಕದಲ್ಲಿಯೇ ಅವರ ಮನೆಯಿತ್ತು. ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಿದ್ದರು. ಮನೆಯ ಸರೀ ಎದುರಿಗೆ ಅವರ ಅಂಗಡಿಯಿತ್ತು.

ಕಲ್ಲಡ್ಕದಲ್ಲಿ ಉದಯವಾಣಿ ಪತ್ರಿಕೆಯ ಏಜೆಂಟ್ ಆಗಿದ್ದರು. ಅವರ ಅಂಗಡಿಯಲ್ಲಿ ಕಟ್ಲೇರಿ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಕೈಗೆ ಸಿಗದಂತಹ ಎಲೆಕ್ಟಾçನಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಅಂದರೆ ರೇಡಿಯೋ, ಟೇಪ್‌ರೆಕಾರ್ಡರ್, ವಾಚ್, ಟಾರ್ಚ್ಲೈಟ್, ಸುಗಂಧ ದ್ರವ್ಯಗಳು ಮೊದಲಾದ ವಸ್ತುಗಳನ್ನು ಮಂಗಳೂರು ಮತ್ತು ಭಟ್ಕಳದಿಂದ ತಂದು ಮಾರಾಟ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಇಂತಹ ವಸ್ತುಗಳನ್ನು ಜನಸಾಮಾನ್ಯರು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ.

ಆದ್ದರಿಂದ ಇಸ್ಮಾಯಿಲ್ ಅವರು ಆ ವಸ್ತುಗಳನ್ನು ವಾರಕ್ಕೆ ಎರಡು ರೂ. ಅಥವಾ ಐದು ರೂ. ಕಂತಿನಲ್ಲಿ ನೀಡುತ್ತಿದ್ದರು. ಆದ್ದರಿಂದ ಅವರ ಬಗ್ಗೆ ಸ್ಥಳೀಯರಿಗೆ ಒಳ್ಳೆಯ ಗೌರವ ಇತ್ತು. ಇಸ್ಮಾಯಿಲ್ ಅವರೂ ಸಹ ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರಾಗಿದ್ದರಿoದ ಅಂದಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಕಮ್ಯೂನಿಸ್ಟ್ ಪಕ್ಷದ ಮುಖಂಡ ಬಿ.ವಿ. ಕಕ್ಕಿಲ್ಲಾಯರೊಂದಿಗೆ ಉತ್ತಮ ಒಡನಾಟ ಇತ್ತು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರೊoದಿಗೆ ಅವರ ಸಂಪರ್ಕ ಉತ್ತಮವಾಗಿತ್ತು. ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರೊಂದಿಗೂ ಅವರಿಗೆ ಒಳ್ಳೆಯ ಸಂಬoಧ ಇತ್ತು. ಈ ಎಲ್ಲಾ ರಾಜಕೀಯ ಸಂಪರ್ಕಗಳಿoದ ಇಸ್ಮಾಯಿಲ್ ಅವರು ಸ್ಥಳೀಯವಾಗಿ ಜನಾನುರಾಗಿ ನಾಯಕರಾಗಿದ್ದರು.

1974 ರ ಜುಲೈ ತಿಂಗಳಲ್ಲಿ ಬಂದoತಹ ಮಹಾ ನೆರೆಗೆ ನೂರಾರು ಮಂದಿ ಮನೆಮಠ ಕಳಕೊಂಡು ಬೀದಿಪಾಲಾಗಿದ್ದರು. ಅಂತಹವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಇಸ್ಮಾಯಿಲ್ ಅವರು ಮಾಡಿದಂತಹ ಜನೋಪಯೋಗಿ ಕಾರ್ಯಗಳು ಮಾದರಿಯಾಗಿತ್ತು.

ಕಲ್ಲಡ್ಕದ ಕೆ.ಸಿ. ರೋಡ್ ಎಂಬಲ್ಲಿ ಸರಕಾರಿ ಜಾಗದಲ್ಲಿ ನೂರಾರು ಮಂದಿಗೆ ಸರಕಾರದ ನೆರವಿನಲ್ಲಿ ಮನೆ ನಿರ್ಮಿಸಿಕೊಡುವಲ್ಲಿ ಇಸ್ಮಾಯಿಲ್ ಅವರ ಪಾತ್ರ ಬಹಳ ದೊಡ್ಡದಿತ್ತು. ಇಂದು ಆ ಮನೆ ಸಮುಚ್ಛಯಕ್ಕೆ ಇಸ್ಮಾಯಿಲ್ ನಗರ ಎಂದೇ ಹೆಸರು.


ಕಲ್ಲಡ್ಕ ಇಸ್ಮಾಯಿಲ್ ಅವರು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದರೂ ಅವರಿಗೆ ರಾಜಕೀಯವಾಗಿ ಕಲ್ಲಡ್ಕದಲ್ಲಿ ವಿರೋಧ ಇತ್ತು. ಕಲ್ಲಡ್ಕದಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದ ಡಾ. ಪ್ರಭಾಕರ ಭಟ್ ದಂಪತಿ ರಾಜಕೀಯವಾಗಿ ಅಂದಿನ ಜನಸಂಘ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.

ಏಳ್ತಿಮಾರು ರುಕ್ಮಯ್ಯ ಪೂಜಾರಿ ಮತ್ತಿತರರು ಡಾ. ಪ್ರಭಾಕರ ಭಟ್‌ರೊಂದಿಗೆ ಸೇರಿಕೊಂಡು ಜನಸಂಘ ಪಕ್ಷವನ್ನು ಸಂಘಟಿಸುತ್ತಿದ್ದರು. ಇದರಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದ ಇಸ್ಮಾಯಿಲ್ ಅವರಿಗೂ ಆರೆಸ್ಸೆಸ್ ಮತ್ತು ಜನಸಂಘದಲ್ಲಿದ್ದ ಡಾ. ಪ್ರಭಾಕರ ಭಟ್ ಅವರಿಗೂ ವೈಯಕ್ತಿಕವಾಗಿ ದ್ವೇಷ ಇಲ್ಲದಿದ್ದರೂ ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದರು.

ಅವರಿಬ್ಬರೂ ತಮ್ಮ ತಮ್ಮ ನಿಲುವುಗಳಿಗೆ ಒಪ್ಪಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ನಡೆದಂತಹ ಘಟನೆಯೊಂದು ಅವರಿಬ್ಬರ ಮಧ್ಯೆ ದೊಡ್ಡ ಬಿರುಕನ್ನು ಮೂಡಿಸಿತ್ತು. ಅದು ಏನೆಂದರೆ ಕಲ್ಲಡ್ಕದಲ್ಲಿ ನಡೆದಿದ್ದ ಅಂದಿನ ರಾಜ್ಯ ಸರಕಾರದ ಸಚಿವ ಕೆ.ಎಚ್. ರಂಗನಾಥ್ ವಿರುದ್ದ ನಡೆದಿದ್ದ ಪ್ರತಿಭಟನೆ.


1975ರಲ್ಲಿ ರಾಜ್ಯದಲ್ಲಿ ಡಿ. ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರಕಾರ ಅಂತಾರಾಜ್ಯ ಅಕ್ಕಿ ಸಾಗಾಟಕ್ಕೆ ನಿರ್ಬಂಧ ಹೇರಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಅಕ್ಕಿ ಬೆಳೆ ಕುಸಿತವಾಗಿದ್ದರಿಂದ ರಾಜ್ಯದ ಜನರಿಗೆ ಅಕ್ಕಿಗೆ ಬರಗಾಲ ಬರಬಾರದು ಎಂಬ ಕಾರಣಕ್ಕಾಗಿ ಈ ನಿರ್ಬಂಧವನ್ನು ಹೇರಲಾಗಿತ್ತು. ಇದರಿಂದಾಗಿ ದ.ಕ. ಜಿಲ್ಲೆಯಿಂದ ಪಕ್ಕದ ಕೇರಳ ರಾಜ್ಯಕ್ಕೆ ಅಕ್ಕಿಯನ್ನು ವಾಮಮಾರ್ಗದಲ್ಲಿ ಸಾಗಿಸುವಂತಹ ಕಾರ್ಯಗಳು ನಡೆಯುತ್ತಿತ್ತು. ಬಂಟ್ವಾಳ ತಾಲೂಕಿನ ಗಡಿ ಗ್ರಾಮಗಳು ಕೇರಳ ರಾಜ್ಯದೊಂದಿಗೆ ಗಡಿಯನ್ನು ಹಂಚಿಕೊoಡಿದ್ದು, ಈ ರಸ್ತೆಗಳಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಚೆಕ್‌ಪೋಸ್ಟ್ ತೆರೆದು ದಿನದ ೨೪ ಗಂಟೆಯೂ ಕಾವಲು ಕಾಯುತ್ತಿತ್ತು.

ಆದರೆ ಜನರು ತಲೆಹೊರೆಯ ಮೂಲಕ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದರು. ದ.ಕ. ಜಿಲ್ಲೆಯಲ್ಲಿ ಕಿಲೋ ಅಕ್ಕಿಗೆ 80 ಪೈಸೆ ಇದ್ದರೆ ಜಿಲ್ಲೆಯ ಗಡಿ ದಾಟಿ ಕೇರಳಕ್ಕೆ ಕೊಂಡೊಯ್ದು ಮಾರಾಟ ಮಾಡಿದರೆ ಕೆ.ಜಿಗೆ 12 ರೂ. ಸಿಗುತ್ತಿತ್ತು. ಇದರಿಂದಾಗಿ ಜನರು ಇದೇ ಕಸುಬನ್ನು ನೆಚ್ಚಿಕೊಂಡಿದ್ದರಿoದ ಈ ಜಿಲ್ಲೆಯಲ್ಲಿ ಕೃಷಿ ಕೆಲಸಗಳಿಗೆ ಕಾರ್ಮಿಕರ ಕೊರತೆ ಉಂಟಾಗಿತ್ತು.

ಆ ಕಾರಣದಿಂದಾಗಿ ಭಾರತೀಯ ಜನ ಸಂಘವು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿತ್ತು. ಇದೇ ಅವಧಿಯಲ್ಲಿ ಅಂದಿನ ರಾಜ್ಯ ಸಚಿವರಾದ ಕೆ.ಎಚ್. ರಂಗನಾಥ್ ಅವರು ಕಾರ‍್ಯಕ್ರಮವೊಂದರಲ್ಲಿ ಭಾಗವಹಿಸಲು ಪುತ್ತೂರಿಗೆ ಬಂದಿದ್ದರು.

ಅವರು ಆ ಕಾರ‍್ಯಕ್ರಮ ಮುಗಿಸಿಕೊಂಡು ಮಂಗಳೂರಿಗೆ ಹೋಗಬೇಕಿದ್ದುದರಿಂದ ಕಲ್ಲಡ್ಕ ಮೂಲಕ ಹಾದುಹೋಗಬೇಕಿತ್ತು. ಈ ಮಾಹಿತಿ ಪಡೆದಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅವರು ಸ್ಥಳೀಯ ಕೆಲವು ಪಕ್ಷದ ಕಾರ‍್ಯಕರ್ತರನ್ನು ಸೇರಿಸಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಈ ಬಗ್ಗೆ ಸ್ಥಳೀಯ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಆದ್ದರಿಂದ ಕಲ್ಲಡ್ಕದಲ್ಲಿ ಇಬ್ಬರು ಪೊಲೀಸರು ಕಾವಲಿಗೆ ನಿಯೋಜನೆಗೊಂಡಿದ್ದರು. ಸಚಿವ ರಂಗನಾಥ್ ಅವರ ಕಾರು ಬರುತ್ತಿದ್ದಂತೆಯೇ ಕಲ್ಲಡ್ಕ ಪ್ರಭಾಕರ ಭಟ್ ಅವರ ನೇತೃತ್ವದ ತಂಡ ಸಚಿವರ ಕಾರನ್ನು ತಡೆಹಿಡಿಯಿತು.

ರಾಜ್ಯ ಸರಕಾರದ ಅಂತಾರಾಜ್ಯ ಅಕ್ಕಿ ಸಾಗಾಟ ನಿರ್ಬಂಧ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿತ್ತು. ಆಗ ಸಚಿವ ರಂಗನಾಥ್ ಅವರು ಸ್ಪಷ್ಟ ಭರವಸೆ ನೀಡಲಿಲ್ಲ. ಬದಲಾಗಿ ಬಂದೋಬಸ್ತ್ಗೆ ನಿಯೋಜಿತರಾಗಿದ್ದ ಪೊಲೀಸರಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಇಸ್ಮಾಯಿಲ್ ಅವರ ನೇತೃತ್ವದಲ್ಲಿ ಸೇರಿದ್ದರು. ಆಗ ಅಲ್ಲಿ ಘರ್ಷಣೆ ಸಂಭವಿಸಿ ತಳ್ಳಾಟ ನಡೆದಿತ್ತು. ಇದರಿಂದ ಸಚಿವ ರಂಗನಾಥ್ ಅವರ ತಲೆಗೆ ಏಟಾಗಿತ್ತು. ಕೊನೆಗೆ ಹೆಚ್ಚುವರಿ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಡಾ. ಪ್ರಭಾಕರ ಭಟ್, ಅವರ ಪತ್ನಿ ಕಮಲಾ ಪ್ರಭಾಕರ ಭಟ್, ರುಕ್ಮಯ್ಯ ಪೂಜಾರಿ ಮತ್ತಿತರರ ವಿರುದ್ಧ ಕೇಸು ದಾಖಲಾಗಿತ್ತು.

ಈ ಪ್ರಕರಣದಲ್ಲಿ ಕೆ.ಎಂ. ಇಸ್ಮಾಯಿಲ್, ಸ್ವಾತಂತ್ರö್ಯ ಹೋರಾಟಗಾರ ಸದಾನಂದ ಪೈ ಮತ್ತಿತರರು ಸಾಕ್ಷಿದಾರರಾಗಿದ್ದರು. ಈ ಪ್ರಕರಣ ಬಂಟ್ವಾಳ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಕೆ.ಎಂ. ಇಸ್ಮಾಯಿಲ್ ಮತ್ತಿತರರು ಪ್ರಾಸಿಕ್ಯೂಷನ್ ಪರವಾಗಿ ಅಂದರೆ ಡಾ. ಪ್ರಭಾಕರ ಭಟ್ ಮತ್ತಿತರರ ವಿರುದ್ಧವಾಗಿ ಸಾಕ್ಷ್ಯ ನುಡಿದಿದ್ದರು.

ಆದರೂ ಆ ಪ್ರಕರಣ ತಾಂತ್ರಿಕ ಕಾರಣಗಳಿಂದ ನ್ಯಾಯಾಲಯದಲ್ಲಿ ಖುಲಾಸೆಗೊಂಡಿತ್ತು.

ಈ ಘಟನೆಯ ನಂತರ ಪ್ರಭಾಕರ ಭಟ್ ಅವರಿಗೂ ಕೆ.ಎಂ. ಇಸ್ಮಾಯಿಲ್ ಅವರಿಗೂ ರಾಜಕೀಯ ವೈಷಮ್ಯ ಮಿತಿಮೀರಿ ಬೆಳೆದಿತ್ತು. ಇಂತಹ ಸಂದರ್ಭದಲ್ಲಿಯೇ 1975 ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾಗಾoಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದ್ದಲ್ಲದೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಿ ಆ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದವರ ವಿರುದ್ಧ ಮೀಸಾ ಕಾಯ್ದೆಯಡಿಯಲ್ಲಿ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು.

ಆದ್ದರಿಂದ ಆರೆಸ್ಸೆಸ್‌ನೊಂದಿಗೆ ಸಂಪರ್ಕ ಹೊಂದಿದ್ದವರು ಭೂಗತರಾಗಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದರು. ಪೊಲೀಸರ ಈ ಪ್ರಯತ್ನಕ್ಕೆ ಕಾಂಗ್ರೆಸ್ ಕಾರ್ಯಕರ್ತರಾದ ಇಸ್ಮಾಯಿಲ್ ಮತ್ತಿತರರು ಒತ್ತಾಸೆಯಾಗಿ ನಿಂತಿದ್ದರು.

ಭೂಗತರಾಗಿದ್ದಂತಹ ಆರೆಸ್ಸೆಸ್ ಕಾರ್ಯಕರ್ತರ ಮಾಹಿತಿಗಳನ್ನು ಪೊಲೀಸರಿಗೆ ನೀಡುತ್ತಿದ್ದರು. ಇದರ ಪರಿಣಾಮವಾಗಿ ಭೂಗತರಾಗಿದ್ದಂತಹ ಡಾ. ಪ್ರಭಾಕರ ಭಟ್ ಅವರು ವಿಟ್ಲ ಸಮೀಪದ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಸಂದರ್ಭದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು.

ಈ ಮಾಹಿತಿ ಇಸ್ಮಾಯಿಲ್ ಅವರಿಗೆ ತಿಳಿದುಬಂದಿತ್ತು. ಇದನ್ನು ಅವರು ತನ್ನೊಂದಿಗೆ ಇದ್ದಂತಹ ಕಾಂಗ್ರೆಸ್ಸಿನ ಸ್ಥಳೀಯ ಪ್ರಮುಖರೊಂದಿಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು. ಇದರಿಂದಾಗಿ ಇಸ್ಮಾಯಿಲ್ ಅವರ ಮೇಲೆ ಇದ್ದಂತಹ ದ್ವೇಷ ಮತ್ತಷ್ಟು ಹೆಚ್ಚಾಯಿತು.

ಇಸ್ಮಾಯಿಲ್ ಮತ್ತವರ ಸಂಗಡಿಗರು ಜನಸಂಘ ಪಕ್ಷ ಮತ್ತು ಆರೆಸ್ಸೆಸ್ ಸಂಘಟನೆಯ ವಿರುದ್ಧ ಪೊಲೀಸರನ್ನು ಬಳಸಿಕೊಂಡು ಮಸಲತ್ತು ನಡೆಸುತ್ತಿದ್ದಾರೆ ಎಂದು ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದವರು.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾವಿಸುವಂತಾಗಿತ್ತು. ಇದರ ಪರಿಣಾಮವೇ ಇಸ್ಮಾಯಿಲ್ ಅವರ ಅಪಹರಣ ಮತ್ತು ಹತ್ಯೆ.
ಮುಂದುವರಿಯುವುದು….

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top