[t4b-ticker]

ಹೀಗೊಂದು ಮೂಡುಬಿದಿರಿಯಲ್ಲಿ ಹಣ್ಣು , ತರಕಾರಿ ಅಂಗಡಿ

Picture of RB NEWS

RB NEWS

Bureau Report

ಮೂಡುಬಿದಿರೆಯ ಸಮಾಜಮಂದಿರ ವಾಣಿಜ್ಯ ಸಂಕೀರ್ಣಕ್ಕೆ ತಾಗಿಕೊಂಡು ಇರುವ ನವಮಿ ವಾಣಿಜ್ಯ ಸಂಕೀರ್ಣದಲ್ಲಿ ತರಕಾರಿ ಅಂಗಡಿಯೊಂದು ತೆರೆಯಲಾಗಿದೆ. ಸರಿ ಸುಮಾರು ಆರೇಳು ತಿಂಗಳುಗಳಾಗಿರಬಹುದು. ಮೂಡುಬಿದಿರೆಗೆ ಹೋದಾಗೆಲ್ಲ ನಾನು ಆ ಅಂಗಡಿಯನ್ನು ನೋಡುವುದುಂಟು, ಅಂಗಡಿಯಾತನನ್ನು ನೋಡುವುದುಂಟು. ಆತ ತುಂಬಾ ಸರಳ ಸಜ್ಜನಿಕೆಯ ಯುವಕ. ಆತನ ಮುಖ ಕಣ್ಣುಗಳ ನೋಟದಲ್ಲಿ ಅಡಗಿರುವುದು ಗ್ರಾಹಕರೇ ದೇವರು ಎನ್ನುವ ನಂಬಿಕೆ. ದೇವರನ್ನೇ ಆರಾಧಿಸುತ್ತಿದ್ದೇನೆ ಎನ್ನುವ ಭಾವದಲ್ಲಿ ಮಾತುಕತೆ ವ್ಯಾಪಾರ ಎಲ್ಲವೂ.

ಅವನ ತಂದೆಯೂ ಕೂಡ ಮೂಡುಬಿದಿರೆ ಮಾರ್ಕೆಟಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದವರು. ಅವರಿಗೆ ಎಲ್ಲರೂ ಹೆಸರಿಟ್ಟದ್ದು “ಉದ್ದಕೈಯವರು, ಕೊಡಗೈದಾನಿ “ ಎಂದು. ಗಾತ್ರ , ಆಕಾರದಲ್ಲಿ ಕೈ ಉದ್ದವಾಗಿರಲಿಲ್ಲ ಬದಲಾಗಿ ಎರಡು ರೂಪಾಯಿ ಮೆಣಸು ಕೇಳಿದರೂ ಒಂದು ಹಿಡಿ, ಒಂದು ರೂಪಾಯಿಯ ಶುಂಠಿ ಕೇಳಿದರೂ ಅಂಗೈಯಗಲದ ಪಲ್ಲೆಯನ್ನೇ ಕೊಡುವುದು. ತರಕಾರಿಯೂ ಅಷ್ಟೆ ತೂಕದ ಮುಳ್ಳಲ್ಲೇ ಕಣ್ಣಿಟ್ಚಿ ತೂಕ ಮಾಡಿದವರಲ್ಲ. ಅಂತೂ ತೂಕದಲ್ಲಿ ಕೊಡಬೇಕಾದಕ್ಕಿಂತ ಸ್ವಲ್ಪ ಜಾಸ್ತಿಯೇ ಕೊಡುವುದು. ತರಕಾರಿಯಲ್ಲಿ ಲಾಭವಿದೆಯಾದರೂ ಅದೆಲ್ಲವನ್ನು ತಾನೇ ತಿನ್ನದೆ ಗ್ರಾಹಕರಿಗೂ ಪಾಲು ಕೊಡುವಂತೆ ಜಾಸ್ತಿ ಕೊಡುತ್ತ ಬಂದವರು.
ಅವರ ಮಗನೇ ಈ ಅನ್ವರ್. ಮೂಲತಃ ನನ್ನೂರಿನ ದಾರಿಯ ಮುಂದೆಯೇ ಇರುವ ಹೊಸ್ಮಾರಿನವರಾದರೂ ಅನ್ವರ್ ಮೂಡುಬಿದಿರೆಯ ಲಾಡಿ ಸಮೀಪ ಮನೆ ಮಾಡಿಕೊಂಡಿದ್ದಾನೆ. ಮಗನಿಗೂ ಅಪ್ಪನದ್ದೇ ಗುಣ,ಅದೇ ನಯ,ಸವಿನಯ .

ಅಂಗಡಿ ಮುಂಬಾಗಿಲು,ಒಳಗೆ ,ಹೊರಗೆ ಸಂಪೂರ್ಣ ಹಚ್ಚ ಹಸಿರು,ಹಳದಿ ಬಣ್ಣ. ಹೊಲದಿಂದ ಆಗತಾನೆ ತಂದಿರುವ ಹಸಿಹಸಿರು ತರಕಾರಿಯೇ ಒತ್ತೊತ್ತಿಟ್ಟು ಅಲಂಕರಿಸಲ್ಪಡುತ್ತದೆ. ಆತನ ಅಂಗಡಿಯ ಒಂದು ವಿಶೇಷತೆ ಇಂದಿನ ತರಕಾರಿಯನ್ನು ನಾಳೆ ಮಾರಾಟ ಮಾಡುವುದಕ್ಕೆ ಬಯಸುವುದಿಲ್ಲ, ಹಾಗೇ ತೆಗೆದಿಟ್ಟು ಕಾಯುವುದಿಲ್ಲ. ದಿನ ಸಂಜೆಯ ಹೊತ್ತಲ್ಲಿ ತರಕಾರಿಗಳನ್ನು ಅಸಲಿ ದರದಲ್ಲಿ ,ಕೆಲವೊಂದನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ನಾಳೆಗೆ ಯಾವುದೂ ಉಳಿದಿರಬಾರದು ಎಂದು ಅತಿಯಾಗಿ ಪ್ರಯತ್ನ ಮಾಡುತ್ತಿರುವುದು. ಹಾಗಾಗಿ ಅವನಲ್ಲಿ ಹಚ್ಚಹಸಿರಿನ ಹೊಸತಾಗಿ ಬಂದವುಗಳೇ ಹೆಚ್ಚು ಇರುವುದು.

ಮೂಡುಬಿದಿರೆಯ ಹೆಚ್ಚಿನ ಹೈಫೈ ವ್ಯಕ್ತಿಗಳು,ಹಿರಿಯ ರಾಜಕಾರಣಿಗಳು ,ಸೆಲೆಬ್ರೆಟಿಗಳು ಅವರೇ ಸ್ವತಃ ಅಂಗಡಿಗೆ ಬಂದು ತರಕಾರಿ ಆಯುವುದು ಹೊಸ ನೋಟವಾಗಿದೆ! ಜೀವಮಾನದ ಸಾಧನೆಯಲ್ಲಿ ಒಮ್ಮೆಯೂ ತರಕಾರಿ ಮಾರುಕಟ್ಚೆಗೂ ಹೋಗಿಲ್ಲದವರು ಈಗ ಅನ್ವರನ ತರಕಾರಿ ಅಂಗಡಿಯೆದುರು ನಿಂತೋ, ಒಳಗೆ ಮುಂದಡಿಯಿಟ್ಟೊ ತರಕಾರಿ ಆಯುತ್ತಾರೆ.
ಆತನ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಗಮನಿಸಿದವರು , ತರಕಾರಿ,ಹಣ್ಣು ಹಂಪಲುಗಳನ್ನು ಕಂಡವರು ಯಾರೂ ಕೂಡಾ ತನ್ನ ಅಂತಸ್ತನ್ನು ಮರೆತು ಬಂದು ಆಯ್ಕೆ ಮಾಡಲೇಬೇಕಾದ ಆಕರ್ಷಣೆ.



ಅಲ್ಲಿಯ ವಿಶೇಷತೆಯೇನೆಂದರೆ ಅದು ಇದು ಚೆನ್ನಾಗಿಲ್ಲ ಎಂದು ಒಮ್ಮೆ ಎತ್ತಿಕೊಂಡದ್ದನ್ನು ಕೆಳಗಿಡುವ ಸಂಗತಿ ಇಲ್ಲ! ಒಂದನ್ನು ಎತ್ತಿ ಆಚೆ ಈಚೆ ಇಡಬೇಕು ಹೊರತು ರಿಜೆಕ್ಟ್ ಅಲ್ಲ!


ಮತ್ತೊಂದು ಸಂಗತಿಯೆಂದರೆ ಎಲ್ಲ ಬಗೆಯ ತರಕಾರಿಯನ್ನು ಇಲ್ಲಿ ಮಾರಾಟ ಮಾಡುತ್ತಿರುವುದು. ಕಡಿಮೆ ಬೇಡಿಕೆಯದ್ದೇ ಆದರೂ ಅದನ್ನೆಲ್ಲ ಸಣ್ಣ ಪ್ರಮಾಣದಲ್ಲಾದರೂ ತಂದಿಟ್ಟು ಯಾವುದೂ ಇಲ್ಲವೆಂದಾಗುವಂತೆ ಆತ ವ್ಯಾಪಾರದಲ್ಲಿ ಗ್ರಾಹಕರ ಸಂತೃಪ್ತಿಗೋಸ್ಕರ ಶ್ರಮಪಡುತ್ತಿರುವುದಕ್ಕೆ ಸಲಾಂ ಹೇಳಲೇಬೇಕು.


ಅಂಗಡಿಯ ಮಾಲಿಕ ನಂದಕುಮಾರ್ ಕುಡ್ವ ಅವರಿಗೂ ,ಅನ್ವರ್ ಇಲ್ಲಿ ತರಕಾರಿ ಅಂಗಡಿ ತೆರೆಯಬೇಕು ಎಂಬ ಆಕಾಂಕ್ಷೆಯಿದ್ದುದರಿಂದಾಗಿ ಕೋಣೆ ಬಾಡಿಗೆಯ ಠೇವಣಿ ಹಣವನ್ನೂ ಪಡೆಯದೆ ಅವಕಾಶ ಒದಗಿಸಿಕೊಟ್ಟಿದ್ದಾರೆ ಎಂದರೆ ಆತನ ವ್ಯಾಪಾರದ ಬಗ್ಯೆ ಸಮಸ್ತ ನಾಗರಿಕರಿಗೇ ಸದಭಿಪ್ರಾಯ ಉಂಟು,ಅಭಿಮಾನ ಉಂಟು ಎಂದರ್ಥ.
ಮೂಡುಬಿದಿರೆಗೆ ಬಂದಾಗ ಸಮಾಜಮಂದಿರ ವಾಣಿಜ್ಯ ಸಂಕೀರ್ಣದ ಜೊತೆಗೇ ಇರುವ ನವಮಿ ವಾಣಿಜ್ಯ ಸಂಕೀರ್ಣದಲ್ಲಿರುವ ನವಮಿ ತರಕಾರಿ ಅಂಗಡಿಗೆ ಸುಮ್ಮನೆ ಒಂದು ಭೇಟಿ ಕೊಟ್ಟು ಕಣ್ತುಂಬಿಸಿಕೊಳ್ಳಿ.




ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top